ನಾಯಕರು, ತಂಜಾವೂರಿನ

ಸು.1532-1675. ವಿಜಯನಗರ ಸಾಮ್ರಾಜ್ಯ ಉಚ್ಛಾಯಸ್ಥಿತಿಯಲ್ಲಿದ್ದ ಕಾಲದಲ್ಲಿ ತಂಜಾವೂರಿನ ಆಶ್ರಿತ ರಾಜರಂತೆ ಆಳುತ್ತಿದ್ದು ಕ್ರಮೇಣ ಪ್ರಬಲರಾದವರು. ಇವರ ಸಂತತಿ ಸುಮಾರು 1532 ರಲ್ಲಿ ಸೇವಪ್ಪ ನಾಯಕನಿಂದ ಸ್ಥಾಪಿತವಾಯಿತು. ವಿಜಯನಗರದ ಚಕ್ರವರ್ತಿಯಾದ ಅಚ್ಯುತ ರಾಯನ ರಾಣಿ ತಿರುಮಲಾಂಬೆಯ ತಂಗಿಯನ್ನು ಮದುವೆಯಾಗಿದ್ದ ಸೇವಪ್ಪ ನಾಯಕ ತನ್ನ ಜೀವನಪರ್ಯಂತವು ವಿಜಯನಗರದ ಪರಮಾಧಿಕಾರಕ್ಕೆ ಮಣಿದು ಸಾರ್ವಭೌಮರಿಗೆ ನಿಷ್ಠೆಯಿಂದಿದ್ದ. ಈತನ ಸ್ವಾಮಿನಿಷ್ಠೆಯನ್ನು ವ್ಯಕ್ತಪಡಿಸುವ ಅನೇಕ ದಾನಶಾಸನಗಳಿವೆ. ಇವನ ಆಸ್ಥಾನದಲ್ಲಿ ಹಲವು ಪ್ರೌಢ ಕವಿಗಳೂ, ಪಂಡಿತರೂ ಇದ್ದರು. ಅವರಲ್ಲಿ ಗೋವಿಂದ ದೀಕ್ಷಿತ ಕವಿಯ ಹೆಸರನ್ನು ಹೇಳಬಹುದು. ಇವನು ಸಾಹಿತ್ಯಸುಧಾ ಮತ್ತು ಸಂಗೀತಸುಧಾನಿಧಿ ಎಂಬ ಕೃತಿಗಳನ್ನು ರಚಿಸಿದ್ದಾನೆ.

ಸೇವಪ್ಪ ನಾಯಕನ ಅನಂತರ ಅವನ ಮಗ ಅಶ್ಚ್ಯುತಪ್ಪ ನಾಯಕ ಆಳಿದ. ಈತ ತಂದೆಯ ನೀತಿಯನ್ನೇ ಅನುಸರಿಸಿದ. ಎರಡನೆಯ ಶ್ರೀ ರಂಗರಾಯನ ಸೋದರನು ಪ್ರಾಂತ್ಯಪಾಲನು ಆಗಿದ್ದ ಒಂದನೆಯ ವೆಂಕಟರಾಯನ ಪಾಲನೆಗೆ ಒಳಪಟ್ಟಿದ್ದ ತಂಜಾವೂರು ಮದುರೆ ಹಾಗೂ ಜಿಂಜೀ ರಾಷ್ಟ್ರಗಳ ಪೈಕಿ ತಂಜಾವೂರಿನ ನಾಯಕರು ವಿಜಯನಗರದ ಸಾರ್ವಭೌಮರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮದುರೆಯ ಕೃಷ್ಣಪ್ಪ ನಾಯಕನ ಮಗ ವೀರಪ್ಪ ನಾಯಕ ಕಪ್ಪಗಳನ್ನು ಸಲ್ಲಿಸದೆ ದಂಗೆ ಏಳಲು ತಂಜಾವೂರಿನ ಅಶ್ಚ್ಯುತಪ್ಪ ನಾಯಕ ಶ್ರೀರಂಗರಾಯನ ಪರವಾಗಿ ವೆಂಕಟರಾಯರೊಡನೆ ಸೇರಿ ಮದುರೆಯ ವೀರಪ್ಪನ ಮಗನ ಸೊಕ್ಕು ಮುರಿದು ಸಾರ್ವಭೌಮರಿಗೆ ಸಲ್ಲಬೇಕಾಗಿದ್ದ ಕಪ್ಪಗಳನ್ನು ಸಲ್ಲಿಸುವಂತೆ ಮಾಡಿ ತನ್ನ ಸ್ವಾಮಿನಿಷ್ಠೆಯನ್ನು ಪ್ರಕಟಿಸಿದ್ದ. ಇವನು ಗುರುಹಿರಿಯರಲ್ಲಿ ಭಕ್ತಿ ಇಟ್ಟಿದ್ದ. ಸುಮತೀಂದ್ರ ಮಠದ ಗುರುಗಳಾದ ವಿಜಯೇಂದ್ರತೀರ್ಥರಿಗೆ ಒಂದು ಗ್ರಾಮವನ್ನು ಉಂಬಳಿಯಾಗಿ ಕೊಟ್ಟಿದ್ದನೆಂದು 1577-78ಕ್ಕೆ ಸಂದ ಅರಿವಿಳಿಮಂಗಳಂ ತಾಮ್ರಶಾಸನದಿಂದ ತಿಳಿದುಬರುತ್ತದೆ. ಇವನು ಸ್ವಾಮಿನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದನಾದರೂ, ಶ್ರೀರಂಗರಾಯನ ತರುವಾಯ ಮುಮ್ಮಡಿ ರಾಮರಾಯರನ್ನು ಬದಿಗೊತ್ತಿ ತಾನೇ ಸಿಂಹಾಸನವನ್ನೇರಿದನೆಂದು 1ನೆಯ ವೆಂಕಟರಾಯನ ಪರಮಾಧಿಕಾರವನ್ನು ನಾಯಕ ರಾಜರು ಅಂಗೀಕರಿಸಲಿಲ್ಲವೆಂದೂ, ಜೆಸುಯಿಟ್ ಪಾದ್ರಿಗಳ ಪತ್ರಗಳಿಂದ ತಿಳಿಯುತ್ತದೆ. ಈ ಕಾರಣದಿಂದ ಕುಪಿತನಾದ ವೆಂಕಟರಾಯ ತಂಜಾವೂರಿನ ಮೇಲೂ ದಂಡೆತ್ತಿ ಬಂದನಾದರೂ ಯುದ್ಧ ಸಂಭವಿಸಿದಂತೆ ತೋರುವುದಿಲ್ಲ. ಏಕೆಂದರೆ ಅಶ್ಚ್ಯುತಪ್ಪ ನಾಯಕನ ಸ್ವಾಮಿನಿಷ್ಠೆಯನ್ನು ಸಾರುವ ಹಾಗೂ ವೆಂಕಟರಾಯನ ಪರಮಾಧಿಕಾರವನ್ನು ಅವನು ಅಂಗೀಕರಿಸಿದ್ದನೆಂದು ತಿಳಿಸುವ ಉಲ್ಲೇಖಗಳು ಅವನ ಶಾಸನಗಳಲ್ಲಿಯೇ ಇವೆ. 1595ರ ಸುಮಾರಿನಲ್ಲಿ ಮದ್ರಾಸಿನ ಬಳಿ ಇದ್ದ ಸೇಂಟ್ ತೋಮೆಗಾಗಿ ಅವರಿಬ್ಬರ ಮಧ್ಯೆ ವಿರಸವುಮಂಟಾಗಿತ್ತೆಂದು ಊಹಿಸಲಾಗಿದೆ. ಆದರೂ ಯುದ್ಧ ನಡೆಯಿತೆಂದು ಹೇಳಲು ಆಧಾರಗಳು ಸಿಕ್ಕಿಲ್ಲ.

1609ರಲ್ಲಿ ಮದುರೆಯ ಸಿಂಹಾಸನಕ್ಕೆ ಬಂದ ಮುತ್ತುವೀರಪ್ಪನಾಯಕ ವಿಜಯನಗರಕ್ಕೆ ಕಪ್ಪಗಳನ್ನು ಕೊಡದೆ ವಿದ್ರೋಹಿಗಳ ನಾಯಕನಾದ ಜಗರಾಯನಿಗೆ ಅಂತರ್ಯುದ್ಧದಲ್ಲಿ ಸಹಾಯಮಾಡಿದ. ಆ ಸಂದರ್ಭದಲ್ಲಿ ತಂಜಾವುರಿನ ಅಶ್ಚ್ಯುತಪ್ಪ ನಾಯಕ ವಿಜಯನಗರದ ವೆಂಕಟರಾಯನೊಂದಿಗೆ ಸಹಕರಿಸಿದ. ವೆಂಕಟರಾಯನ ಸೇನಾನಿ ಮಾಟ್ಲ ಆತನೊಂದಿಗೆ ಸೇರಿ ಮುತ್ತುವೀರಪ್ಪನನ್ನು ಸೋಲಿಸಿ ವೆಂಕಟರಾಯನ ವಿಶ್ವಾಸವನ್ನು ಗಳಿಸಿಕೊಂಡಿದ್ದ. ಇವನ ಮಗ ರಘುನಾಥ ಈ ಯುದ್ಧದಲ್ಲಿ ತೋರಿಸಿದ ಸಾಹಸಕ್ಕಾಗಿ ಪೆನುಗೊಂಡದ ದರ್ಬಾರಿನಲ್ಲಿ 1ನೆಯ ವೆಂಕಟರಾಯ ಅವನಿಗೆ ಯೋಗ್ಯ ಉಡುಗೊರೆಯಾಗಿ ಉತ್ತಮ ಕುದುರೆಗಳನ್ನು, ಆಭರಣಗಳನ್ನೂ ಕೊಟ್ಟು ಅವನನ್ನು ಗೌರವಿಸಿದ. ಮತ್ತೊಮ್ಮೆ 1611 ರಲ್ಲಿ ಅಶ್ಚ್ಯುತಪ್ಪ ಮದುರೆಯ ಮುತ್ತು ವೀರಪ್ಪನನ್ನು ಎದುರಿಸಬೇಕಾಯಿತು. ಈ ಯುದ್ಧದಲ್ಲಿ ಮುತ್ತುವೀರಪ್ಪನಿಗೆ ತಂಜಾವೂರಿನ ವಿರುದ್ಧ ಜಯ ಲಭಿಸಲಿಲ್ಲ. ಮದುರೆಯ ನಾಯಕರ ಯುದ್ಧಾಭಿಲಾಷೆಯನ್ನು ಅನುಭವಿ ರಾಜಕಾರಣಿ ಮಂತ್ರಿ ಗೋವಿಂದ ದೀಕ್ಷಿತ್ ಅರಿತಿದ್ದ. ತರುಣ ರಘುನಾಥ ಸಕಲ ವಿಧದಲ್ಲೂ ರಾಜ್ಯವನ್ನಾಳಲು ಮತ್ತು ಶತ್ರುಗಳನ್ನು ಎದುರಿಸಲು ಸಮರ್ಥನಾಗಿದ್ದುದರಿಂದ ಅವನನ್ನು ಸಿಂಹಾಸನಕ್ಕೆ ತರಬೇಕೆಂದು ಸಲಹೆ ಮಾಡಿದ. ಅದರಂತೆ ಅಶ್ಚ್ಯುತಪ್ಪ ನಾಯಕ ಇನ್ನು ಜೀವಿಸಿದ್ದಾಗಲೇ ರಘುನಾಥ ಪಟ್ಟಕ್ಕೆ ಬಂದ. ಅಶ್ಚ್ಯುತಪ್ಪ ನಾಯಕ ಅನೇಕ ದೇವಾಲಯಗಳನ್ನು ನಿರ್ಮಿಸಿ ಅವುಗಳಿಗೆ ದಾನದತ್ತಿ ಮತ್ತು ಉಂಬಳಿಗಳನ್ನು ಕೊಟ್ಟಿದ್ದ. ಆ ವೇಳೆಗಾಗಲೇ ದಕ್ಷಿಣ ಭಾರತದಲ್ಲಿ ಹರಡಿಕೊಂಡಿದ್ದ ಪೋರ್ಚುಗೀಸರೊಂದಿಗೆ ಇವನು ಸ್ನೇಹದಿಂದಲೇ ಇದ್ದ. 

ಮೊದಲೇ ಸಾಹಸಿಯೆನಿಸಿಕೊಂಡಿದ್ದ ರಘುನಾಥನನ್ನು ರಾಜ್ಯದ ಭದ್ರತೆಯ ದೃಷ್ಠಿಯಿಂದ ಸಿಂಹಾಸನಕ್ಕೆ ತರಲಾಯಿತೆಂದು ಗೋವಿಂದ ದೀಕ್ಷಿತ ವಿರಚಿತ ಸಾಹಿತ್ಯ ರತ್ನಾಕರದಲ್ಲಿ ವಿವರಣೆಯಿದೆ. ಇವನ ಆಳ್ವಿಕೆಯ ಕಾಲ 1614-1634. ರಘುನಾಥ ನಾಯಕ ಪೆನುಗೊಂಡದ ಆಸ್ಥಾನಕ್ಕೆ ನಿಷ್ಠೆಯಿಂದಿದ್ದ. ತನ್ನ ಸ್ವಾಮಿಯಾದ ವೆಂಕಟರಾಯನ ರಾಜಧಾನಿಯ ಮೇಲೆ ಮಹಮದೀಯರು ದಾಳಿ ಮಾಡಿದಾಗ ರಘುನಾಥ ನೆರವಾದ. ಅಲ್ಲದೆ ಮೊರಸುನಾಡಿನಲ್ಲಿ ಉಂಟಾದ ದಂಗೆಯನ್ನು ಅಡಗಿಸುವುದರಲ್ಲೂ ಸಹಕರಿಸಿದ. ವೆಂಕಟರಾಯನ ವಿರುದ್ಧ ಜಿಂಜಿಯ ಕೃಷ್ಣಪ್ಪ ನಾಯಕ ದಂಗೆಯೆದ್ದಿದ್ದ. ಆವನನ್ನು ವಿಜಯನಗರದವರು ಸೆರೆ ಹಿಡಿದು ಇಟ್ಟಿದ್ದಾಗ ರಘುನಾಥ ಮಧ್ಯಪ್ರವೇಶಿಸಿ ಅವನನ್ನು ಸೆರೆಯಿಂದ ಬಿಡಿಸಿದ. ಈ ಉಪಕಾರಕ್ಕಾಗಿ ಜಿಂಜಿಯ ನಾಯಕ ರಘುನಾಥನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ. 

ಮುಮ್ಮಡಿ ಶ್ರೀರಂಗರಾಯನ ಕಾಲದಲ್ಲಿ ವಿಜಯನಗರದ ಸಿಂಹಾಸನಕ್ಕಾಗಿ ಅಂತರ್ಯುದ್ಧ ಮುಂದುವರಿಯಿತು. ಅದರಲ್ಲಿ ತಂಜಾವೂರಿನ ರಘುನಾಥ ನಾಯಕ ಗಣನೀಯ ಪಾತ್ರ ವಹಿಸಿದ್ದ. ವಿದ್ರೋಹಿ ನಾಯಕನಾದ ಜಗರಾಯನೊಂದಿಗೆ ಮದುರೆ ನಾಯಕರು ಜಿಂಜಿಯ ನಾಯಕರೂ ಸಹಕರಿಸಿದ್ದರು. ಇವರ ವಿರುದ್ಧವಾಗಿ ಯಾಚಮ ನಾಯಕ ಮೊದಲಾದವರು ರಘುನಾಥನ ನಾಯಕತ್ವದಲ್ಲಿ ರಾಜಕುಮಾರ 4ನೆಯ ರಾಮದೇವನಿಗೆ ಸಿಂಹಾಸನವನ್ನು ಉಳಿಸಿಕೊಡಲು ಹೋರಾಡಿದರು. ಈ ಅಂತರ್ಯುದ್ಧದಲ್ಲಿ ರಘುನಾಥನ ಪ್ರವೇಶದಿಂದಾಗಿ ರಾಮದೇವನಿಗೆ ವಿಜಯಲಕ್ಷ್ಮಿ ಒಲಿದಳು. 1617-18 ರಲ್ಲಿ ನಡೆದ ತೋಪುರು ಕದನದಲ್ಲಿ ರಘುನಾಥ ಪ್ರಚಂಡ ವಿಜಯ ಸಾಧಿಸಿದ. ಅಶ್ಚ್ಯುತಪ್ಪ ನಾಯಕನ ಹಾಗೂ ರಘುನಾಥನ ಮಂತ್ರಿಯಾಗಿದ್ದ ಗೋವಿಂದ ದೀಕ್ಷಿತನ ಸೋದರ ಯಜ್ಞನಾರಾಯಣ ದೀಕ್ಷಿತನ ಸಂಸ್ಕøತ ಕಾವ್ಯ ಸಾಹಿತ್ಯರತ್ನಾಕರದಲ್ಲೂ ರಘುನಾಥನ ಆಸ್ಥಾನದಲ್ಲಿದ್ದ ಕವಯಿತ್ರಿ ರಾಮಭದ್ರಾಂಬ ರಚಿಸಿದ ರಘುನಾಥಾಭ್ಯುದಯಂ ಕಾವ್ಯದಲ್ಲೂ ಈ ಬಗ್ಗೆ ವಿವರಗಳಿವೆ.

ಮದ್ರಾಸಿನ ಬಳಿ ಇದ್ದ ಸೇಂಟ್ ತೋಮೆಗಾಗಿ ರಘುನಾಥ ಆಶೆಪಟ್ಟಂತೆ ತೋರುತ್ತದೆ. ಆ ಕಾರಣ ವಿಜಯನಗರದವರೊಂದಿಗೆ ವಿರಸ ಉಂಟಾಗಿರಬೇಕು. ಆದ್ದರಿಂದ ಇವನು ಸ್ವಲ್ಪ ಕಾಲದ ಅನಂತರ ವಿಜಯನಗರದವರಿಗೂ ಪೋರ್ಚುಗೀಸರಿಗೂ ನಡೆದ ಯುದ್ಧದಲ್ಲಿ ಪೋರ್ಚುಗೀಸರಿಗೆ ಸಹಾಯ ಮಾಡಿದನೆಂದು ತೋರುತ್ತದೆ. ಮುಂದೆ ಅಂತರ್ಯುದ್ಧದ ಕಾಲದಲ್ಲಿ ಈ ಸ್ಥಳ ವಿಜಯನಗರದವರ ಕೈತಪ್ಪಿ ಪೋರ್ಚುಗೀಸರ ವಶವಾಯಿತು. 

ತೋಪೂರು ವಿಜಯದ ಅನಂತರ ರಘುನಾಥ ವೈಭವದಿಂದ ರಾಜ್ಯವಾಳಿದ. 1620ರ ಸುಮಾರಿಗೆ ಇವನಿಗೂ ಪೋರ್ಚುಗೀಸರಿಗೂ ವಿರಸ ಉಂಟಾಯಿತು. ರಘುನಾಥ ಅವರನ್ನು ನಾಗಪಟ್ಟಣದಿಂದ ಹೊರದೂಡಿದನಲ್ಲದೆ, ಅವರು ನೆಲೆಯೂರಿದ ಉತ್ತರ ಸಿಂಹಳವನ್ನೂ (ಈಗಿನ ಶ್ರೀಲಂಕಾ) ಅತಿಕ್ರಮಿಸಿದ. ಅವನು ಸಿಂಹಳವನ್ನು ಮುಟ್ಟಲು ಸಮುದ್ರದಲ್ಲಿ ನೌಕಾ ಸೇತುವೆಯನ್ನೇ ನಿರ್ಮಿಸಿದನೆಂದು, ಇವನು ಸಿಂಹಳದಲ್ಲಿ ಕಾಲಿಟ್ಟಾಗ ಪೋರ್ಚುಗೀಸರು ತಮ್ಮ ನೌಕೆಗಳನ್ನು ಹತ್ತಿ ಪಲಾಯನ ಮಾಡಿದರೆಂದು ಹೇಳಲಾಗಿದೆ. ಇವನು ಸಿಂಹಳದ ಮಿತ್ರ ಸಾಂಗಿಲಿಯನ್ನು ಮತ್ತೆ ಸಿಂಹಾಸನದ ಮೇಲೆ ಕೂರಿಸಿ ಅವನ ರಕ್ಷಣೆಗಾಗಿ ಒಂದು ಸೇನಾ ತುಕಡಿಯನ್ನು ಬಿಟ್ಟು ಹಿಂತಿರುಗಿದ. 

ರಘುನಾಥ ಇಂಗ್ಲೀಷರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ತಂಜಾವೂರು ರಾಜ್ಯದಲ್ಲಿ ವ್ಯಾಪಾರದಲ್ಲಿ ತೊಡಗುವಂತೆ 1622 ರಲ್ಲಿ ಅವನನ್ನು ಆಹ್ವಾನಿಸಿದ. ಡಚ್ಚರ ಹಡಗೊಂದು ಪೋಚುಗೀಸರ ಹಲ್ಲೆಗೆ ಗುರಿಯಾದಾಗ ಡಚ್ಚರ ರೋಯ್ಲೆಂಟ್ ಕ್ರೇಪ್ ತಂಜಾವೂರಿನಲ್ಲಿ ಆಶ್ರಯ ಕೋರಿದ. ಅವನನ್ನು ರಘುನಾಥ ಆದರದಿಂದ ಕಂಡನಲ್ಲದೆ, ಸಿಂಹಳದಿಂದ ಬಂದಿದ್ದ ಡಚ್ ನಾಯಕ ಜೆಡ್ಡ್ ಎಂಬುವನಿಗೂ ಆಶ್ರಯ ನೀಡಿ ಟ್ರಾಂಕ್ಯುಬಾರ್‍ನಲ್ಲಿ ಒಂದು ಕೋಟೆ ನಿರ್ಮಿಸಲು ಅನುಮತಿ ಕೊಟ್ಟ. 

ರಘುನಾಥನ ಕಾಲದಲ್ಲಿ ತಂಜಾವೂರಿನ ಆಸ್ಥಾನ ವೈಭವಪೂರ್ಣವಾಗಿತ್ತು. ಯುದ್ಧಕೌಶಲದಲ್ಲಿ ನುರಿತಿದ್ದಂತೆಯೆ, ಇವನು ಲೇಖನಿ ಹಿಡಿದು ಕಾವ್ಯರಚನೆ ಮಾಡುವುದರಲ್ಲಿಯೂ ಪರಿಣತನಾಗಿದ್ದ. ಪಾರಿಜಾತಾಪಹರಣಂ, ವಾಲ್ಮೀಕಿಚರಿತಂ, ಅಶ್ಚ್ಯುತಾಭ್ಯುದಯಂ, ಗಜೇಂದ್ರಮೋಕ್ಷಂ, ರುಕ್ಮಿಣೀಕೃಷ್ಣ ವಿವಾಹ ಯಕ್ಷಗಾನಂ ಮೊದಲಾದುವು ಇವನು ತೆಲುಗು ಹಾಗೂ ಸಂಸ್ಕøತ ಭಾಷೆಗಳಲ್ಲಿ ರಚಿಸಿದ ಕೃತಿಗಳು. ಇವನು ಸಂಗೀತಾಸುಧಾ ಎಂಬ ಗ್ರಂಥದಲ್ಲಿ ಹೊಸ ರಾಗತಾಳಗಳನ್ನು ವಿಮರ್ಶಿಸಿದ್ದಾನೆ. ಈತ ವೀಣಾವಾದನಕ್ಕೆ ಪ್ರೋತ್ಸಾಹ ನೀಡಿದ. ತಂಜಾವೂರು ಇವನ ಕಾಲದಲ್ಲಿ ಕಲೆಗಳ ನೆಲೆಯಾಗಿ ಬೆಳೆದು ಇಂದಿಗೂ ಅದರ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಇವನು ಇಷ್ಟದೇವರಾದ ರಾಮನಿಗಾಗಿ ರಾಮೇಶ್ವರಮ್‍ನಲ್ಲಿ ದೇವಾಲಯಗಳನ್ನು ನಿರ್ಮಿಸಿದ. ಕುಂಭಕೋಣಮ್‍ನಲ್ಲಿ ಕುಂಭೇಶ್ವರ ದೇವಸ್ಥಾನದ ಪ್ರಸಿದ್ಧ ಗೋಪುರವನ್ನೂ ಇವನು ನಿರ್ಮಿಸಿದ.

ರಘುನಾಥನ ಮಗ ವಿಜಯರಾಘವ 1634-1673 ರಲ್ಲಿ ಆಳಿದ. ತಂದೆಯಂತೆ ಇವನು ಪರಾಕ್ರಮಿಯಲ್ಲದಿದ್ದರೂ ಸಾಹಿತ್ಯ ಮತ್ತು ಕಲಾಪೋಷಕನಾಗಿದ್ದ. ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ. ಇವನೇ ಹೆಸರಾಂತ ಕವಿಯಾಗಿದ್ದ. ಇವನ ರಾಜಕೀಯ ವ್ಯಕ್ತಿತ್ವ ಅಷ್ಟಾಗಿ ಪ್ರಕಾಶಕ್ಕೆ ಬರಲಿಲ್ಲ. ವಿಜಯನಗರದ ಸಾರ್ವಭೌಮರೊಂದಿಗೆ ಇವನು ಹಿಂದಿನ ನೀತಿ ಅನುಸರಿಸಲಿಲ್ಲ. ಆರನೆಯ ಶ್ರೀರಂಗ ಪೆನುಗೊಂಡದಲ್ಲಿ 1642 ರಲ್ಲಿ ವಿಜಯನಗರ ಸಿಂಹಾಸನವನ್ನೇರಿದ ಕಾಲದಲ್ಲಿ ವಿಜಯನಗರದ ವೈಭವ ಕೇವಲ ನೆನಪಾಗಿ ಮಾತ್ರ ಉಳಿದಿತ್ತು. ಅದೇ ಸಮಯವನ್ನು ಸಾಧಿಸಿ ಗೋಲ್ಕೊಂಡ ಹಾಗೂ ಬಿಜಾಪುರ ಸುಲ್ತಾನರು ವಿಜಯನಗರ ಸಾಮಂತರ ಆಳ್ವಿಕೆಯಲ್ಲಿದ್ದ ತಂಜಾವೂರು, ಮದುರೆ ಮತ್ತು ಜಿಂಜಿ ರಾಜ್ಯಗಳ ಮೇಲೆ ದಾಳಿಮಾಡಿದರು. ಬಿಜಾಪುರದ ಸೇನಾನಿ ಷಾಜಿ ಜಿಂಜಿಯ ವರೆಗೂ ರಾಜ್ಯವನ್ನು ಗೆದ್ದು ಹೊಸದಾಗಿ ಆಕ್ರಮಿಸಿದ ಪ್ರಾಂತ್ಯಕ್ಕೆ ತಾನೇ ಪ್ರಾಂತ್ಯಪಾಲನಾದ.

ಇದೇ ಸಮಯಕ್ಕೆ ಮದುರೆಯ ತಿರುಮಲ ನಾಯಕ ತನ್ನ ಸ್ವಾತಂತ್ರ್ಯ ಘೋಷಿಸಲು ಯತ್ನಿಸಿದನೆಂದು ಅವನ ಮೇಲೆ ಆರನೆಯ ಶ್ರೀರಂಗರಾಯ ಹೂಡಬೇಕೆಂದಿದ್ದ ಯುದ್ಧವನ್ನು ಎದುರಿಸಲು ಮದುರೆಯ ನಾಯಕ ತಂಜಾವೂರಿನವರನ್ನೂ ಜಿಂಜಿಯವರನ್ನೂ ಆಹ್ವಾನಿಸಿದ್ದ. ಆದರೆ ಈ ಸುದ್ದಿಯನ್ನು ವಿಜಯರಾಘವ ನಾಯಕ ಶ್ರೀರಂಗರಾಯನಿಗೆ ತಿಳಿಸಿ ಅವನೊಂದಿಗೆ ಸೇರಿಕೊಂಡ. ತಂಜಾವೂರಿನ ನಾಯಕನ ವಿಶ್ವಾಸಘಾತಕತನಕ್ಕೆ ತಕ್ಕ ಶಿಕ್ಷೆ ಕೊಡಬೇಕೆಂಬ ಉದ್ದೇಶದಿಂದ ತಿರುಮಲ ನಾಯಕ ಗೋಲ್ಕೊಂಡದ ಸುಲ್ತಾನನೊಂದಿಗೆ ಸಂಧಿ ಮಾಡಿಕೊಂಡು ಅವನು ಹಿಂದಿನಿಂದ ಬಂದು ಶ್ರೀರಂಗರಾಯನ ಸೇನೆಯ ಮೇಲೆ ಎರಗುವಂತೆ ಮಾಡಿದ. ಹೀಗಾಗಿ ಶ್ರೀರಂಗರಾಯ ಜಿಂಜಿಯಿಂದ ಕಾಲ್ತೆಗೆಯಬೇಕಾಯಿತು. ಅನಂತರ 1650 ರಲ್ಲಿ ಶ್ರೀರಂಗ, ತಂಜಾವೂರು, ಮದುರೆ ಹಾಗೂ ಜಿಂಜಿಯ ನಾಯಕರನ್ನು ಒಟ್ಟುಗೂಡಿಸಿ, ತಂಜಾವೂರಿನ ಸಮೀಪದಲ್ಲಿ ಸುಲ್ತಾನರನ್ನು ಎದುರಿಸಲು ಸೇನೆಯನ್ನು ಸಜ್ಜುಗೊಳಿಸಿದ. ಆದರೆ ಇವರಲ್ಲಿ ಒಡಕುಂಟಾಗಿ ಶ್ರೀರಂಗ ಮೈಸೂರಿನ ರಾಜನಿಂದ ಸಹಾಯವನ್ನು ಯಾಚಿಸುವಂತಾಯಿತು. ಇಂಥ ದುಸ್ಥಿತಿಯಲ್ಲಿ ಗೋಲ್ಕೊಂಡದ ಸೇನೆ ತಂಜಾವೂರಿನ ವಿಜಯರಾಘವ ನಾಯಕನನ್ನು ಸೋಲಿಸಿತು. ಅವನು ಶರಣಾಗಿ ಸಂಧಿಮಾಡಿಕೊಂಡ. ಇದೇ ಸಮಯವನ್ನು ಸಾಧಿಸಿ ಬಿಜಾಪುರದವರೂ ಗೋಲ್ಕೊಂಡದವರನ್ನು ಸೇರಿಕೊಂಡು ಶ್ರೀರಂಗನ ಮೇಲೆ ಯುದ್ಧ ಹೂಡಿ ಅವನ ಪರಮಾಧಿಕಾರಕ್ಕೆ ಒಳಪಟ್ಟಿದ್ದ ತಂಜಾವೂರು ಹಾಗೂ ಮದುರೆ ನಾಯಕ ರಾಜ್ಯಗಳ ಮೇಲೆ ನುಗ್ಗಿದರು. ತಂಜಾವೂರಿನ ವಿಜಯರಾಘವ ನಾಯಕ ದಟ್ಟವಾದ ಕಾಡಿನಲ್ಲಿ ಅಡಗಿಕೊಂಡ. ಮುಂದೆ ಸುಲ್ತಾನರೊಂದಿಗೆ ಸಂಧಾನ ನಡೆಸಿ ಶರಣಾಗಿ ಅವರ ಸಾರ್ವಭೌಮತ್ವವನ್ನು ಅಂಗೀಕರಿಸಿದ. ಶತ್ರುಗಳು ಹಿಂತಿರುಗಿದ ಅನಂತರವೂ ತನ್ನ ಸೇನೆಯನ್ನು ಪುನಃ ಚೇತನಗೊಳಿಸಲು ವಿಜಯರಾಘವ ಯಾವ ಪ್ರಯತ್ನವನ್ನು ಮಾಡಿದಂತಿಲ್ಲ. ಪ್ರತಿಯಾಗಿ ಆ ವೇಳೆಗಾಗಲೇ ಶತ್ರುಸೇನೆಯ ಕೊಳ್ಳೆಗೆ ಒಳಗಾಗಿದ್ದ ಪ್ರಜೆಗಳ ಮೇಲೆ ಕರಭಾರವನ್ನು ಹೇರಿದ. ದೀರ್ಘಕಾಲದಿಂದಲೂ ದುರಾಕ್ರಮಣ ಹಾಗೂ ನಿರಂಕುಶ ಪ್ರಭುತ್ವಕ್ಕೆ ತಲೆಬಾಗಿದ್ದ ಪ್ರಜೆಗಳು ವಿಧಿಯಿಲ್ಲದೆ ಈ ಕರಭಾವನ್ನು ಹೊರಬೇಕಾಯಿತು.

ಹಿಂದಿನಿಂದಲೂ ತಂಜಾವೂರು ಸಂತತಿಯ ಬಗ್ಗೆ ಅಸೂಯೆಯಿಂದಿದ್ದ ಮದುರೆಯ ನಾಯಕ ಸಂತತಿಯಲ್ಲಿ 1659 ರಿಂದ 1680 ರ ವರೆಗೂ ಚೊಕ್ಕನಾಥನೆಂಬವನು ಆಳುತ್ತಿದ್ದ. ಇವನು ತಂಜಾವೂರಿನ ಮೇಲೆರಗಿ ವಿಜಯರಾಘವನನ್ನು ಯುದ್ಧದಲ್ಲಿ ಕೊಂದ. ತಂಜಾವೂರಿನ ನಾಯಕ ಶ್ರೀರಂಗರಾಯನಿಗೆ ನಿಷ್ಠೆಯಿಂದಿದ್ದುದೇ ಈ ಯುದ್ಧಕ್ಕೆ ಕಾರಣವೆಂದು ತಿಳಿಯಲಾಗಿದೆ. ಇವನ ಮಗ ಮನ್ನಾರ ದಾಸನೂ ಯುದ್ಧದಲ್ಲಿ ಹೋರಾಡಿ ಮಡಿದ. ಅರಮನೆಯ ಸ್ತ್ರೀಸಮೂಹದವರು ಆತ್ಮಾಹುತಿ ಮಾಡಿಕೊಂಡು ತಮ್ಮ ಶೀಲವನ್ನು ಉಳಿಸಿಕೊಂಡರು. ಒಂದು ಹಸುಳೆ ಮಾತ್ರ ಸಾವಿನ ದವಡೆಯಿಂದ ಪಾರಾಯಿತು. ಆ ಮಗುವೇ ಚೆಂಗಮಲ ದಾಸನೆಂದು ಹೆಸರಾದ್ದು.

ವಿಜಯರಾಘವ ನಾಯಕ ಉದ್ದಾಮ ಪಂಡಿತ ಹಾಗೂ ಕವಿಯಾಗಿದ್ದ. ತೆಲುಗು ಭಾಷೆಯಲ್ಲಿ ರಚಿಸಲಾದ ರಘುನಾಥಾಭ್ಯುದಯಮು ಎಂಬುದು ತಂದೆಯನ್ನು ಕುರಿತು ಇವನು ಬರೆದ ನಾಟಕ. ಇದರಲ್ಲಿ ತಂದೆಯ ಕಾಲಕ್ಕೆ ಸಂದ ಕೆಲವು ಮಹತ್ವಪೂರ್ಣ ಐತಿಹಾಸಿಕ ಘಟನೆಗಳು ನಿರೂಪಿತವಾಗಿವೆ. ಇವನ ರಾಣಿ ರಾಜಮಾಂಬ ರಚಿಸಿದ ಮನ್ನಾರುದಾಸವಿಲಾಸ ತೆಲುಗು ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹಕಾರಿಯಾಯಿತು. ವಿಜಯರಾಘವನ ಪೋಷಣೆಯಲ್ಲಿದ್ದ ಅನೇಕ ಕವಿಗಳಲ್ಲಿ ಚೆಮಕೂರಿ ವೆಂಕಟಕವಿ ಪ್ರಸಿದ್ಧನಾದವ. ವೆಂಕಟಕವಿ ರಚಿಸಿದ ಸಾರಂಗಧರಚರಿತ ಮತ್ತು ವಿಜಯವಿಲಾಸ ಕೃತಿಗಳು ತೆಲುಗು ವಾಙ್ಮಯದಲ್ಲಿ ಪ್ರೌಢಕಾವ್ಯಗಳೆನಿಸಿಕೊಂಡಿವೆ. ವಿಜಯರಾಘವ ಅನೇಕ ದಾನಧರ್ಮಗಳಿಗೂ ಹೆಸರಾಗಿದ್ದ.

ಮದುರೆಯ ತಿರುಮಲ ನಾಯಕನ ತಂಜಾವೂರು ದಾಳಿಯ ಕಾಲದಲ್ಲಿ ಉಳಿದುಕೊಂಡ ಚೆಂಗುಮಲದಾಸನೇ ತಂಜಾವೂರು ನಾಯಕ ಸಂತತಿಯ ಕೊನೆಯ ನಾಯಕ. ಬಿಜಾಪರದ ಸೇನೆ ತಂಜಾವೂರನ್ನು ಆಕ್ರಮಿಸಿದಾಗ ಷಾಜಿಯ ಮಗ ಏಕೋಜಿ ಚೆಂಗುಮಲ ದಾಸನನ್ನು ಸಿಂಹಾಸನಕ್ಕೇರಿಸಿದ. ಆದರೆ ಕೆಲವೇ ದಿನಗಳಲ್ಲಿ ಏಕೋಜಿ ಇವನನ್ನು ಪದಚ್ಯುತಗೊಳಿಸಿ ತಾನೇ ರಾಜನಾದ. ಹೀಗೆ 1675ರಲ್ಲಿ ತಂಜಾವೂರಿನ ನಾಯಕರ ಸಂತತಿ ಅಳಿದು ಏಕೋಜಿಯಿಂದ ಮರಾಠರ ಸಂತತಿ ಆರಂಭವಾಯಿತು.
    (ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ